ಪಿಟ್ಟನ ಭಾರತ ಅಧಿನಿಯಮ - 
1773 ರಲ್ಲಿ ಜಾರಿಗೆ ಬಂದಿದ್ದ ನಿಯಮನ ಅಧಿನಿಯಮದ (ರೆಗ್ಯುಲೇಟಿಂಗ್ ಆಕ್ಟ್) ನ್ಯೂನತೆಗಳನ್ನು ಹೋಗಲಾಡಿಸಿ ಈಸ್ಟ್ ಇಂಡಿಯ ಕಂಪನಿಯ ಸರ್ಕಾರದ ನಡವಳಿಕೆಯ ಮೇಲೆ ಪಾರ್ಲಿಮೆಂಟಿನ ಹತೋಟಿಯನ್ನು ಕ್ರಮೇಣ ಹೆಚ್ಚಿಸುವ ಉದ್ದೇಶದಿಂದ 1774 ರಲ್ಲಿ ಬ್ರಿಟನ್ನಿನ ಪಾರ್ಲಿಮೆಂಟು ಅಂಗೀಕರಿಸಿದ ಅಧಿನಿಯಮ. 1783 ರಲ್ಲಿ ಬ್ರಿಟಿಷ್ ಪ್ರಧಾನಿಯಾದ ವಿಲಿಯಮ್ ಪಿಟ್ (ಕಿರಿಯ) ತನ್ನ ಆಡಳಿತದ ಆರಂಭದಲ್ಲಿ ಕೈಗೊಂಡ ಪ್ರಮುಖ ಕ್ರಮಗಳಲ್ಲಿ ಒಂದು.
ಈ ಅಧಿನಿಯಮದ ಪ್ರಕಾರ ಕಂಪನಿಯ ವಸಾಹತು ಆಡಳಿತದ ಮೇಲಣ ಅಧಿಕಾರ ಆರು ಮಂದಿ ಪ್ರಿವಿ ಕೌನ್ಸಿಲರುಗಳಿಂದ ಕೂಡಿದ ಒಂದು ನಿಯಂತ್ರಣ ಮಂಡಳಿಗೆ ಒಳಪಟ್ಟಿತು. ಇಂಗ್ಲೆಂಡಿನಲ್ಲಿದ್ದ ಕಂಪನಿಯ ಅಧಿಕಾರಿಗಳಿಗೆ ಭಾರತದಿಂದ ಕಳುಹಿಸಲಾಗುತ್ತಿದ್ದ ಎಲ್ಲ ಪತ್ರಗಳನ್ನೂ ಈ ಮಂಡಳಿಯ ಮುಂದೆ ಇಡಬೇಕಾಗಿತ್ತು. ಭಾರತಕ್ಕೆ ಕಂಪನಿಯ ನಿರ್ದೇಶಕರು ಕಳುಹಿಸುವ ಎಲ್ಲ ಆಜ್ಞೆಗಳನ್ನೂ ಬದಲಿಸುವ ಅಥವಾ ತಿದ್ದುವ ಅಧಿಕಾರವನ್ನು ಈ ಮಂಡಲಿಗೆ ಕೊಡಲಾಗಿತ್ತು. ರಾಜಕೀಯ ಹಾಗೂ ಸೈನಿಕ ವ್ಯವಹಾರಗಳನ್ನು ಗಮನಿಸಲು ಮೂವರು ನಿರ್ದೇಶಕರಿಂದ ಕೂಡಿದ ಗೋಪ್ಯ ಸಮಿತಿಯನ್ನು ನೇಮಿಸಲಾಯಿತು. ನಿಯಂತ್ರಣ ಮಂಡಲಿಯಿಂದ ಮಂಜೂರಾದ ಆದೇಶಗಳನ್ನು ನಿರ್ದೇಶಕ ಮಂಡಲಿಯಾಗಲಿ ಮಾಲೀಕರ ಮಂಡಲಿಯಾಗಲಿ ಬದಲಿಸುವಂತಿರಲಿಲ್ಲ.

ಆಧಿಪತ್ಯಗಳ ಗವರ್ನರ್‍ಗಳ ಮೇಲೆ ಗವರ್ನರ್-ಜನರಲ್ಲನಿಗೆ ಅಧಿಕಾರ ನೀಡಲಾಯಿತು. ಹಿಂದೆ ನಾಲ್ವರು ಸದಸ್ಯರನ್ನೊಳಗೊಂಡಿದ್ದ ಗವರ್ನರ್-ಜನರಲ್ಲನ ಕಾರ್ಯನಿರ್ವಾಹಕ ಪರಿಷತ್ತಿನ ಸದಸ್ಯರ ಸಂಖ್ಯೆಯನ್ನು ಮೂರಕ್ಕೆ ಇಳಿಸಲಾಯಿತು. ಗವರ್ನರನ ಪರಿಷತ್ತಿನ ಸದಸ್ಯರ ಸಂಖ್ಯೆಯನ್ನೂ ಇದೇ ರೀತಿ ಇಳಿಸಲಾಯಿತು.
ಕಂಪನಿಯ ಸೇವೆಯಲ್ಲಿದ್ದು ಭಾರತದಲ್ಲಿ ದುಷ್ಕøತ್ಯ ಎಸಗಿದವರಿಗೆ ಕ್ಷಮೆ ತೋರಲಾಗದೆಂದು ಘೋಷಿಸಿ ಅಂಥವರನ್ನು ವಿಚಾರಣೆ ಮಾಡಲು ಇಂಗ್ಲೆಂಡಿನಲ್ಲೊಂದು ವಿಶೇಷ ನ್ಯಾಯಲಯವನ್ನು ಸ್ಥಾಪಿಸಲಾಯಿತು. ಈ ನ್ಯಾಯಲಯದಲ್ಲಿ ಮೂವರು ನ್ಯಾಯಮೂರ್ತಿಗಳು, ನಾಲ್ವರು ಪೀರರು, ಆರು ಮಂದಿ ಹೌಸ್ ಆಫ್ ಕಾಮನ್ಸ್ ಸದಸ್ಯರು ಇದ್ದರು. 

ಪಿಟ್ಟನ ಭಾರತ ಅಧಿನಿಯಮ ಗವರ್ನರ್-ಜನರಲ್‍ನಿಗೆ ಭಾರತದಲ್ಲಿ ವಿಶೇಷ ಅಧಿಕಾರವನ್ನು ಕೊಟ್ಟಿತು. ಆಧಿಪತ್ಯಗಳ ಗವರ್ನರ್‍ಗಳ ಮೇಲೆ ಇವನ ಅಧಿಕಾರ ಸ್ಥಿರಗೊಂಡಿತು. ಮುಂದೆ ಭಾರತದ ಒಕ್ಕೂಟಕ್ಕೆ ಇದರಿಂದ ಸಹಾಯವಾಯಿತಾದರೂ ದೇಶದ ಆಡಳಿತದ ಮೇಲೆ ಒಂದು ಕಡೆ ಕಂಪನಿಯ ಆಡಳಿತ ಮಂಡಲಿ, ಮತ್ತೊಂದು ಕಡೆ ಇಂಗ್ಲೆಂಡಿನ ಪಾರ್ಲಿಮೆಂಟ್ ಅಧಿಕಾರ ಪಡೆದವು.
ಪಿಟ್ಟನ ಭಾರತ ಅಧಿನಿಯಮದ ಅನುಸರಣೆಯಲ್ಲಿ ನಿಯಂತ್ರಣ ಮಂಡಲಿಯ ಅಧಿಕಾರ ಕ್ರಮೇಣ ಅದರ ಅಧ್ಯಕ್ಷನ ಹಸ್ತಗತವಾಯಿತು. ಅದರ ಇನ್ನಿಬ್ಬರು ಸದಸ್ಯರಾದ ಚಾನ್ಸೆಲರ್ ಆಫ್ ಎಕ್ಸ್‍ಚೆಕರ್ ಮತ್ತು ಸೆಕ್ರೆಟರಿ ಆಫ್ ಸ್ಟೇಟ್ ಇವರು ಮಂಡಲಿಯ ಸಭೆಗಳಿಗೆ ಸಾಮಾನ್ಯವಾಗಿ ಬರುತ್ತಿರಲಿಲ್ಲ. ಅವರಿಗೆ ಸರ್ಕಾರದ ಕೆಲಸವೇ ಕೈತುಂಬಾ ಇರುತ್ತಿತ್ತು. ಆದ್ದರಿಂದ ಅವರ ಸಹಿಗಳನ್ನು ಪಡೆದು ಮಂಡಲಿಯ ಅಧ್ಯಕ್ಷನೇ ಅನೇಕ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದ. ಮುಂದೆ ಈ ಅಭ್ಯಾಸ ಬೆಳೆದು, ಭಾರತದ ವ್ಯವಹಾರಗಳನ್ನು ನೋಡಿಕೊಳ್ಳಲು ಒಂದು ಮಂತ್ರಿ ಖಾತೆಯನ್ನೇ ತೆರೆಯಬೇಕಾಯಿತು. ಪಿಟ್ಟನ ಭಾರತ ಅಧಿನಿಯಮ ಭಾರತದ ಆಡಳಿತದ ಇತಿಹಾಸದಲ್ಲಿ ನಿಜಕ್ಕೂ ಒಂದು ಮುಖ್ಯವಾದ ಘಟ್ಟವೆನ್ನಬಹುದು. ಈ ಅಧಿನಿಯಮ ಕೆಲವು ಸಣ್ಣ ತಿದ್ದುಪಡಿಗಳೊಡನೆ 1858 ರ ವರೆಗೂ ಜಾರಿಯಲ್ಲಿತ್ತು.								    (ಎಂ.ಎನ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ